ಕ್ರೀಡಾಪಟುಗಳಿಗೆ ಸಿಹಿಸುದ್ದಿ ನೀಡಿದ ಎಂ ಎಸ್ ಧೋನಿ: 60ಕ್ಕೂ ಅಧಿಕ ಕ್ರಿಕೆಟ್ ಅಕಾಡೆಮಿ ಸ್ಥಾಪನೆ

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌.ಧೋನಿ ಅವರ ಕ್ರಿಕೆಟ್‌ ಅಕಾಡೆಮಿಯೊಂದು ಬೆಳಗಾವಿಯ ಜೈನ್‌ ಹೆರಿಟೇಜ್ ಸ್ಕೂಲ್‌ನಲ್ಲಿ ಆರಂಭವಾಗಿದೆ. ಧೋನಿ ಹೆಸರಿನಲ್ಲಿ ಈಗಾಗಲೇ ಭಾರತದ ಹಲವು ನಗರಗಳು, ಇಂಗ್ಲೆಂಡ್‌, ಕೆನಡಾ ಸೇರಿ ವಿಶ್ವದ 60 ಕಡೆಗಳಲ್ಲಿ ಅಕಾಡೆಮಿ ಇದ್ದು, ವಿಶ್ವರ್ಜೆಯ ಕೋಚಿಂಗ್‌ ವ್ಯವಸ್ಥೆ, ಎಲ್ಲಾ ಕ್ರೀಡೆಗಳ ತರಬೇತಿ ಕೇಂದ್ರಗಳು ಒಳಗೊಂಡಿವೆ ಎಂದು ಆಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಮಿಹಿರ್‌ ದಿವಾಕರ್‌ ಮಾಹಿತಿ ನೀಡಿದ್ದಾರೆ.

ನಾವು ಈಗಾಗಲೇ ದೇಶದಾದ್ಯಂತ ವಿವಿಧ ನಗರಗಳಲ್ಲಿ 60ಕ್ಕೂ ಅಧಿಕ ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಿದ್ದೇವೆ. ಭಾರತದೊಳಗೆ ಮಾತ್ರವಲ್ಲದೇ ಅಮೆರಿಕ, ಕೆನಡಾ ಹಾಗೂ ಇಂಗ್ಲೆಂಡ್‌ನಲ್ಲೂ ನಮ್ಮ ಅಕಾಡೆಮಿಗಳು ಆರಂಭವಾಗಿವೆ. ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಅಕಾಡೆಮಿಯಲ್ಲಿ ಅತ್ಯಾಧುನಿಕ ಹಾಗೂ ವಿಶ್ವದರ್ಜೆಯ ಸೌಲಭ್ಯಗಳಿದ್ದು, ಅತ್ಯುತ್ತಮ ಕೋಚ್‌ಗಳನ್ನು ಹೊಂದಿದೆ. ನಾನು ನಿಧಾನವಾಗಿ ಜಾಗತಿಕ ಮಟ್ಟದಲ್ಲಿ ನಮ್ಮ ಅಕಾಡೆಮಿಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ ಎಂದು ಮಿಹಿರ್‌ ದಿವಾಕರ್‌ ತಿಳಿಸಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿ ಸ್ಥಾಪಿತವಾಗಿರುವ ಈ ಕ್ರಿಕೆಟ್ ಅಕಾಡೆಮಿಗಳು ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಅಕಾಡೆಮಿಯನ್ನು ತೆರೆಯುವ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಅತ್ಯುತ್ತಮ ಅವಕಾಶವನ್ನು ಒದಗಿಸುವುದು ಈ ಅಕಾಡೆಮಿಯ ಉದ್ದೇಶವಾಗಿದೆ. ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಅಕಾಡೆಮಿ ಕೇವಲ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿಲ್ಲ. ಈ ಅಕಾಡೆಮಿಯಲ್ಲಿ ಬ್ಯಾಡ್ಮಿಂಟನ್, ಆರ್ಚರಿ, ಟೇಬಲ್ ಟೆನಿಸ್ ಹಾಗೂ ಫುಟ್ಬಾಲ್ ಕ್ರೀಡೆಯ ತರಬೇತಿಯನ್ನು ನೀಡಲಾಗುತ್ತದೆ. ಈ ಎಲ್ಲಾ ಕಾರ್ಯಚರಣೆಗಳು ಮಹೇಂದ್ರ ಸಿಂಗ್ ಧೋನಿಯವರ ಮಾರ್ಗದರ್ಶನದಲ್ಲಿಯೇ ನಡೆಯಲಿದೆ ಎಂದು ಆಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಮಿಹಿರ್‌ ದಿವಾಕರ್‌ ಮಾಹಿತಿ ನೀಡಿದ್ದಾರೆ.

ಬೆಂಗಳೂರಿಗೆ ಹೋಗಿ ಬರಲು ಕಷ್ಟವಾಗುವುದರಿಂದ ಇಲ್ಲಿನ ಸಮೀಪದ ಯುವಕರಿಗೆ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಬೆಳಗಾವಿಯಲ್ಲಿ ಅಕಾಡೆಮಿ ತೆರೆಯಲಾಗಿದೆ. ಬೆಳಗಾವಿ ಹಾಗೂ ಇದರ ಸುತ್ತಮುತ್ತಲಿನ ಭಾಗಗಳಲ್ಲಿ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಪ್ರತಿಭೆಯಿದ್ದು, ದೂರದ ಬೆಂಗಳೂರಿಗೆ ಹೋಗಿ ಕಲಿಯಲು ಸಾಧ್ಯವಾಗದೇ ಅವಕಾಶವಂಚಿತರಾಗುತ್ತಿದ್ದರು. ಆದರೆ ಇದೀಗ ದೇಶದ ಅತ್ಯುನ್ನತ ಕೋಚ್‌ಗಳ ಗರಡಿಯಲ್ಲಿ ಈ ಭಾಗದ ಕ್ರೀಡಾಪಟುಗಳು ತರಬೇತಿ ಪಡೆಯಲಿದ್ದಾರೆ ಎಂದು ಮಿಹಿರ್ ತಿಳಿಸಿದ್ದಾರೆ.