ಆಗಸ್ಟ್​ 28ರಂದು ಭಾರತ-ಪಾಕ್ ಹೈ ವೋಲ್ಟೇಜ್ ಪಂದ್ಯ

ಮುಂಬೈ: ಮುಂಬರುವ 15ನೇ ಆವೃತ್ತಿಯ ಏಷ್ಯಾಕಪ್​ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಆಗಸ್ಟ್​ 28ರಂದು ನಡೆಯಲಿರುವ ಹೈ ವೋಲ್ಟೇಜ್​​ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಗ್ರೂಪ್​ ಎ ವಿಭಾಗದಲ್ಲಿ ಉಭಯ ತಂಡಗಳು ದುಬೈ ಮೈದಾನದಲ್ಲಿ ಸೆಣಸಾಟ ನಡೆಸಲಿವೆ. ಟೂರ್ನಿಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿಯ ಸೆಕ್ರೆಟರಿ ಜಯ್ ಶಾ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಯಾವ ದಿನಾಂಕದಂದು ಯಾವೆಲ್ಲ ಪಂದ್ಯಗಳು ನಡೆಯಲಿವೆ ಎಂಬುದನ್ನು ತಿಳಿಸಿದ್ದಾರೆ.

ಈ ಸಲದ ಏಷ್ಯಾಕಪ್​​ ಶ್ರೀಲಂಕಾದಲ್ಲಿ ಆಯೋಜನೆಗೊಳ್ಳಬೇಕಾಗಿತ್ತು. ಆದರೆ, ಆರ್ಥಿಕ ಸಂಕಷ್ಟದಿಂದಾಗಿ ಲಂಕಾ ಕ್ರಿಕೆಟ್ ಬೋರ್ಡ್​ ಟೂರ್ನಿ ಆಯೋಜನೆಯಿಂದ ಹಿಂದೆ ಸರಿದಿದೆ. ಹೀಗಾಗಿ, ಯುಎಇನಲ್ಲಿ ಪ್ರಸಕ್ತ ಸಾಲಿನ ಟೂರ್ನಿ​ ನಡೆಯಲಿದೆ. ಮಹತ್ವದ ಸರಣಿಯಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಮತ್ತೊಂದು ಕ್ವಾಲಿಫೈಯರ್​ ತಂಡವೂ ಭಾಗಿಯಾಗಲಿದೆ. ಆಗಸ್ಟ್​ 27ರಿಂದ ಸರಣಿ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ. ಆಗಸ್ಟ್​ 27ರಿಂದ ಸೆಪ್ಟೆಂಬರ್​​ 11ರವರೆಗೆ ಟೂರ್ನಿ ನಿಗದಿಯಾಗಿದೆ.