ರೋಚಕ ಪಂದ್ಯದಲ್ಲಿ 7 ವಿಕೆಟ್ ಗೆಲುವು ಸಾಧಿಸಿದ ಗುಜರಾತ್

ಕೋಲ್ಕತ್ತಾ: ಕೊನೆಯ ಓವರ್ನಲ್ಲಿ ಡೇವಿಡ್ ಮಿಲ್ಲರ್ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಪರಿಣಾಮ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಗುಜರಾತ್ ಟೈಟಾನ್ಸ್ ರೋಚಕ 7 ವಿಕೆಟ್ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ.
ಗೆಲ್ಲಲು 189 ರನ್ಗಳ ಗುರಿಯನ್ನು ಪಡೆದ ಗುಜರಾತ್ ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಅರ್ಧಶತಕ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಸಾಹಸದಿಂದ 19.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 191 ರನ್ ಹೊಡೆದು ಫೈನಲ್ ಪ್ರವೇಶಿಸಿತು. ಟೂರ್ನಿಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಗುಜರಾತ್ ಈಗ ಮೊದಲ ಐಪಿಎಲ್ ಸರಣಿಯಲ್ಲೇ ಫೈನಲ್ ಪ್ರವೇಶಿಸಿ ವಿಶಿಷ್ಟ ಸಾಧನೆ ಮಾಡಿದೆ.
ಕೊನೆಯ ಓವರ್ನಲ್ಲಿ ಗುಜರಾತ್ ಗೆಲುವಿಗೆ 16 ರನ್ಗಳ ಅಗತ್ಯವಿತ್ತು. ಪ್ರಸಿದ್ಧ ಕೃಷ್ಣ ಬೌಲಿಂಗ್ನ ಸತತ ಮೂರು ಎಸೆತಗಳನ್ನು ಮಿಲ್ಲರ್ ಸಿಕ್ಸರ್ಗೆ ಅಟ್ಟಿ ಗುಜರಾತಿಗೆ ರೋಚಕ ಗೆಲುವು ತಂದುಕೊಟ್ಟರು.
ಆರಂಭದಲ್ಲೇ ವಿಕಟ್ ಪತನ:
ಮೊದಲ ಓವರಿನ ಎರಡನೇ ಎಸೆತದಲ್ಲಿ ವೃದ್ಧಿಮಾನ್ ಸಹಾ ಅವರ ವಿಕೆಟ್ ಕಳೆದುಕೊಂಡರೂ ಶುಭಮನ್ ಗಿಲ್ ಮತ್ತು ಮ್ಯಾಥ್ಯು ವೇಡ್ ಎರಡನೇ ವಿಕೆಟ್ಗೆ 72 ರನ್ ಜೊತೆಯಾಟವಾಡಿ ಚೇತರಿಕೆ ನೀಡಿದರು. ಶುಭಮನ್ ಗಿಲ್ 35 ರನ್(21 ಎಸೆತ, 6 ಬೌಂಡರಿ, 1 ಸಿಕ್ಸರ್) ಮ್ಯಾಥ್ಯು ವೇಡ್ 35 ರನ್(30 ಎಸೆತ, 6 ಬೌಂಡರಿ) ಹೊಡೆದು ಔಟಾದರು.
ನಂತರ ಜೊತೆಯಾದ ಹಾರ್ದಿಕ್ ಪಾಂಡ್ಯ ಮತ್ತು ಡೇವಿಡ್ ಮಿಲ್ಲರ್ ಮುರಿಯದ 4ನೇ ವಿಕೆಟ್ಗೆ 61 ಎಸೆತಗಳಿಗೆ 106 ರನ್ ಚಚ್ಚಿ ತಂಡಕ್ಕೆ ಗೆಲುವನ್ನು ತಂದುಕೊಟ್ಟರು. ಡೇವಿಡ್ ಮಿಲ್ಲರ್ 68 ರನ್(38 ಎಸೆತ, 3 ಬೌಂಡರಿ, 5 ಸಿಕ್ಸರ್) ಹಾರ್ದಿಕ್ ಪಾಂಡ್ಯ 40 ರನ್(27 ಎಸೆತ, 5 ಬೌಂಡರಿ) ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು.