ಟ್ರೋಫಿಗೆ ಮುತ್ತಿಟ್ಟ ಯಂಗ್​ ಇಂಡಿಯಾ

ಶಾರ್ಜಾ: ಅಂಡರ್​​ 19 ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಸಿಂಹಳೀಯರ ವಿರುದ್ಧ 9 ವಿಕೆಟ್​​ಗಳ(DLS) ಗೆಲುವು ದಾಖಲು ಮಾಡಿದ್ದು, ಏಷ್ಯಾಕಪ್​​​ ಟ್ರೋಫಿಗೆ ಮುತ್ತಿಕ್ಕಿದೆ.

ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡ ಟೀಂ ಇಂಡಿಯಾ ಬೌಲಿಂಗ್​ ದಾಳಿಗೆ ತತ್ತರಿಸಿ ಹೋಯಿತು. ಆರಂಭದಲ್ಲೇ ಲಂಕಾ ತಂಡದ ಆರಂಭಿಕರಾದ ಚಮೀಡಾ(2) ಹಾಗೂ ಡಾನಿಲ್​(6) ವಿಕೆಟ್​ ಪಡೆದುಕೊಳ್ಳುವಲ್ಲಿ ಬೌಲರ್ಸ್​​ ಯಶಸ್ವಿಯಾದರು. ಯಾವುದೇ ಕಾರಣಕ್ಕೂ ಲಂಕಾ ಬ್ಯಾಟರ್​ಗಳು ದೊಡ್ಡ ಮೊತ್ತ ಗಳಿಕೆ ಮಾಡಲು ಭಾರತದ ಬೌಲರ್ಸ್​ಗಳು ಬಿಡಲಿಲ್ಲ. ಲಂಕಾ ತಂಡ 7 ವಿಕೆಟ್​ನಷ್ಟಕ್ಕೆ 74ರನ್​ಗಳಿಕೆ ಮಾಡಿದ್ದ ವೇಳೆ ಮಳೆ ಸುರಿದ ಕಾರಣ ಪಂದ್ಯವನ್ನ 38 ಓವರ್​ಗೆ ಕಡಿತಗೊಳಿಸಲಾಯಿತು. ಹೀಗಾಗಿ ಲಂಕಾ ತಂಡ 38 ಓವರ್​ಗಳಲ್ಲಿ 9ವಿಕೆಟ್​ನಷ್ಟಕ್ಕೆ 106ರನ್​​ಗಳಿಕೆ ಮಾಡಿತು.

ಭಾರತದ ಪರ ಮಾರಕ ಬೌಲಿಂಗ್​ ಪ್ರದರ್ಶನ ನೀಡಿದ ವಿಕಿ ಒಸ್ತಾಲ್​ 3 ವಿಕೆಟ್​, ಕೌಶಲ್ ತಾಂಬೆ 2 ವಿಕೆಟ್​ ಪಡೆದುಕೊಂಡರೆ, ರಾಜವರ್ಧನ್​, ರವಿಕುಮಾರ್​ ಹಾಗೂ ರಾಜ್​ ತಲಾ 1 ವಿಕೆಟ್ ಪಡೆದುಕೊಂಡರು.

DLS ನಿಯಮದ ಪ್ರಕಾರ ಟೀಂ ಇಂಡಿಯಾಗೆ 38 ಓವರ್​ಗಳಲ್ಲಿ 102ರನ್​ಗಳಿಕೆ ಮಾಡುವ ಗುರಿ ನೀಡಲಾಯಿತು. ಈ ಟಾರ್ಗೆಟ್​ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 21 ಓವರ್​ಗಳಲ್ಲಿ 1 ವಿಕೆಟ್​ನಷ್ಟಕ್ಕೆ 104ರನ್​ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು. ತಂಡದ ಪರ ಆರಂಭಿಕ ರಘುವಂಶಿ ಅಜೇಯ 56ರನ್​, ಹಾರೂನ್​ ಸಿಂಗ್​​ 5 ಹಾಗೂ ಶಿಖಾ ರಾಶೀದ್​ ಅಜೇಯ 31ರನ್​ಗಳಿಕೆ ಮಾಡಿ,ತಂಡವನ್ನ ಗೆಲುವಿನ ನಗೆ ಬೀರಿತು.