ಮತ್ತೆ ಪತ್ರಿಕಾಗೋಷ್ಠಿ ತಪ್ಪಿಸಿಕೊಂಡ ಕೊಹ್ಲಿ!

ಜೋಹಾನ್ಸ್ ಬರ್ಗ್: ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿಕೆಗೆ ವಿರುದ್ಧವಾಗಿ ಹೇಳಿಕೆ ನೀಡಿದಲ್ಲಿಂದ ಭಾರತ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಪತ್ರಿಕಾ ಗೋಷ್ಠಿಗಳಿಗೆ ಗೈರು ಹಾಜರಾಗುವುದನ್ನು ಮುಂದುವರಿಸಿದ್ದಾರೆ. ಸೋಮವಾರ ಟೆಸ್ಟ್‌ ಪಂದ್ಯವಿದ್ದರೂ ಅವರು ಭಾನುವಾರದ ಪಂದ್ಯಪೂರ್ವ ಪತ್ರಿಕಾಗೋಷ್ಠಿಗೆ ಹಾಜ ರಾಗಿಲ್ಲ.

ಎಂದಿನಂತೆ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ಹಾಜರಾಗಿದ್ದರು. ಹಲವು ಗೊಂದಲಗಳಿದ್ದರೂ ದ್ರಾವಿಡ್‌ ಪತ್ರಕರ್ತರ ಪ್ರಶ್ನೆಗಳಿಗೆ ಶಾಂತವಾಗಿಯೇ ಉತ್ತರಿಸಿದರು.

ಕೊಹ್ಲಿಯೇಕೆ ಪತ್ರಿಕಾಗೋಷ್ಠಿಗೆ ಬಂದಿಲ್ಲ ಎನ್ನುವುದಕ್ಕೂ ದ್ರಾವಿಡ್‌ ಯಥಾಪ್ರಕಾರ ಉತ್ತರಿಸಿದರು. “ಕೊಹ್ಲಿ ಗೈರಿಗೆ ನಿರ್ದಿಷ್ಟ ಕಾರಣಗಳೇನಿಲ್ಲ. ಈ ಬಗ್ಗೆ ನಾನು ನಿರ್ಧರಿಸಲು ಸಾಧ್ಯವಿಲ್ಲ. ಆದರೆ ಕೊಹ್ಲಿ ತಮ್ಮ 100ನೇ ಟೆಸ್ಟ್‌ನ ಹಿಂದಿನ ದಿನ ಗೋಷ್ಠಿಗೆ ಹಾಜರಾಗಲಿದ್ದಾರೆ. ಆಗ ನೀವು ಬೇಕಾದ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು’ ಎಂದು ಅವರು ಪತ್ರಕರ್ತರಿಗೆ ಹೇಳಿದರು.

ಜ.11ರಿಂದ ಆರಂಭವಾಗುವ ಈ ಸರಣಿಯ ಮೂರನೇ ಟೆಸ್ಟ್‌ ಕೊಹ್ಲಿ ಪಾಲಿಗೆ 100ನೇ ಟೆಸ್ಟ್‌ ಆಗಲಿದೆ. ಇಷ್ಟೆಲ್ಲದರ ನಡುವೆ ಕೊಹ್ಲಿಯನ್ನು ದ್ರಾವಿಡ್‌ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

“ಈ ಟೆಸ್ಟ್‌ ಪಂದ್ಯಕ್ಕಿಂತಲೂ ಮಿಗಿಲಾದ ಹಲವು ಬೇರೆ ವಿಷಯಗಳ ಸದ್ದೇ ಜೋರಾಗಿ ಕೇಳಿಬರುತ್ತಿದೆ. ಅದೇನೇ ಇದ್ದರೂ ತಂಡದ ನೈತಿಕತೆಯನ್ನು ಉನ್ನತಮಟ್ಟದಲ್ಲಿ ಕಾಪಿಟ್ಟುಕೊಳ್ಳುವುದು ಕಷ್ಟದ ವಿಷಯವೇನಲ್ಲ. ಏಕೆಂದರೆ ತಂಡದ ನಾಯಕ ಕೊಹ್ಲಿಯೇ ಮಾದರಿಯಾಗಿ ನಿಂತು ಮುನ್ನಡೆಸುತ್ತಿದ್ದಾರೆ. ಕಳೆದ 20 ದಿನಗಳಿಂದ ಕೊಹ್ಲಿ ಅದ್ಭುತವಾಗಿ ಅಭ್ಯಾಸ ನಡೆಸುತ್ತಿದ್ದಾರೆ, ತಂಡವನ್ನು ಹಾಗೆಯೇ ಮುಂದೊಯ್ಯುತ್ತಿದ್ದಾರೆ. ಸದ್ಯದಲ್ಲಿಯೇ ಅವರಿಂದ ದೊಡ್ಡ ಮೊತ್ತವೊಂದು ಬರಲಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.