ಕಾಮನ್‌ವೆಲ್ತ್ ಗೇಮ್ಸ್ 2022 ಹಾಕಿ: ಕಂಚಿನ ಪದಕ ಗೆದ್ದ ಭಾರತ ಮಹಿಳಾ ತಂಡ

ಹಾಲಿ ಚಾಂಪಿಯನ್‌ ನ್ಯೂಜಿಲೆಂಡ್‌ ತಂಡವನ್ನು ಮಣಿಸಿದ ಭಾರತದ ವನಿತೆಯರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಹಾಕಿ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಉಭಯ ತಂಡಗಳು ಭಾನುವಾರ ನಡೆದ ಪಂದ್ಯದ ಪೂರ್ಣಾವಧಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದ್ದವು.

ಹೀಗಾಗಿ ಫಲಿತಾಂಶ ನಿರ್ಣಯಕ್ಕಾಗಿ ಪೆನಾಲ್ಟಿ ಶೂಟೌಟ್‌ ಮೊರೆಹೋಗಲಾಯಿತು. ಈ ಸೆಣಸಾಟದಲ್ಲಿ ಭಾರತ ತಂಡ 2-1 ಅಂತರದಿಂದ ಮುನ್ನಡೆ ಸಾಧಿಸಿ, ಜಯದ ನಗೆ ಬೀರಿತು.

ಭಾರತ ಹಾಗೂ ನ್ಯೂಜಿಲೆಂಡ್‌, ಸೆಮಿಫೈನಲ್‌ ಪಂದ್ಯಗಳಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ವಿರುದ್ಧ ಸೋಲು ಕಂಡಿದ್ದವು. ಹೀಗಾಗಿ ಇಂದು ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಿದವು.

ಶನಿವಾರ ರಾತ್ರಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಎದುರು ಭಾರತ 1-1 ಅಂತರದ ಡ್ರಾ ಸಾಧಿಸಿತ್ತು. ಆದರೆ, ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ 3-0 ಅಂತರದಿಂದ ಸೋಲೊಪ್ಪಿಕೊಂಡಿತ್ತು.

ಪೆನಾಲ್ಟಿ ಶೂಟೌಟ್‌ನಲ್ಲಿ ಆಸ್ಟ್ರೇಲಿಯಾದ ರೋಸಿ ಮಲೊನ್‌ ಅವರು ಮೊದಲ ಪ್ರಯತ್ನದಲ್ಲಿ ಗೋಲು ಗಳಿಸಲು ವಿಫಲರಾಗಿದ್ದರು. ನಂತರ ಭಾರತದ ಲಾಲ್‌ರೆಮ್ಸಿಯಾಮಿ ಪೆನಾಲ್ಟಿ ಶೂಟೌಟ್‌ಗೆ ಮುಂದಾದರು.

ಈ ವೇಳೆ ಮಧ್ಯ ಪ್ರವೇಶಿಸಿದ ರೆಫರಿ, ಮಲೊನ್ ಶೂಟೌಟ್‌ ವೇಳೆ ಕ್ಲಾಕ್‌ನಲ್ಲಿ (ಟೈಮರ್‌) ಕೌಂಟ್‌ಡೌನ್‌ ಆರಂಭವಾಗಿರಲಿಲ್ಲ ಎಂದು ಮತ್ತೊಂದು ಅವಕಾಶ ನೀಡಿದರು. ಆ ಅವಕಾಶದಲ್ಲಿ ಮಲೊನ್‌ ಗೋಲು ಗಳಿಸಿದರು.