ಬ್ಯಾಟ್ಸ್‌ಮ್ಯಾನ್‌ ವೃದ್ಧಿಮಾನ್ ಸಹಾಗೆ ಬೆದರಿಕೆ : ಪತ್ರಕರ್ತನಿಗೆ ನಿಷೇಧ ಹೇರಿದ ಬಿಸಿಸಿಐ

ಮುಂಬೈ: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ವೃದ್ಧಿಮಾನ್ ಸಹಾಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ಬೋರಿಯಾ ಮಜುಂದಾರ್‌ಗೆ 2 ವರ್ಷ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಷೇಧ ಹೇರಿದೆ ಈ ಬಗ್ಗೆ ನೋಟಿಸ್ ಹೊರಡಿಸಿರುವ ಬಿಸಿಸಿಐ, ವೃದ್ಧಿಮಾನ್ ಸಹಾ ಆರೋಪದ ಬೆನ್ನಲ್ಲೇ ಬಿಸಿಸಿಐ ಈ ಬಗ್ಗೆ ತನಿಖೆ ನಡೆಸಿ ಪತ್ರಕರ್ತ ಬೋರಿಯಾ ಮಜುಂದಾರ್ ವಿರುದ್ಧ ಕ್ರಮ ಕೈಗೊಂಡಿದ್ದು, 2 ವರ್ಷ ಯಾವುದೇ ಕ್ರಿಕೆಟ್ ಪಂದ್ಯದ ಸುದ್ದಿಗೋಷ್ಠಿ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಮಜುಂದಾರ್‌ಗೆ ಪ್ರವೇಶವಿಲ್ಲ. 2 ವರ್ಷಗಳ ಕಾಲ ಟೀಂ ಇಂಡಿಯಾದ ಯಾವೊಬ್ಬ ಆಟಗಾರನೊಂದಿಗೂ ಸಂದರ್ಶನಕ್ಕೆ ಅವಕಾಶವಿಲ್ಲ. ಜೊತೆಗೆ 2 ವರ್ಷ ಬಿಸಿಸಿಐ ಮತ್ತು ಅದರ ಇತರ ಕ್ರಿಕೆಟ್ ಮಂಡಳಿ ಪ್ರವೇಶಕ್ಕೆ ನಿಷೇಧ ಹೇರುತ್ತಿದೆ ಎಂದು ನೋಟಿಸ್ ನೀಡಿದೆ.

ಏನಿದು ಪ್ರಕರಣ:
ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾವನ್ನು ಆಯ್ಕೆ ಮಾಡುವಾಗ ವೃದ್ಧಿಮಾನ್ ಸಾಹ ಅವರನ್ನು ಬಿಸಿಸಿಐ ಆಯ್ಕೆ ಸಮಿತಿಯು ಕೈಬಿಟ್ಟಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಸಾಹಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇದಾದ ಬಳಿಕ ಸಂದರ್ಶನ ಕೊಡಲು ನಿರಾಕರಿಸಿದಕ್ಕಾಗಿ ನನಗೆ ಬೋರಿಯಾ ಮಜುಂದಾರ್ ಬೆದರಿಕೆಯೊಡ್ಡಿದರು ಎಂದು ಸಹಾ ಆರೋಪಿಸಿದರು.