ಮೇಕೆದಾಟು ಯೋಜನೆ ರಾಜಕೀಯ ಪಕ್ಷಗಳ ಸ್ವಾರ್ಥ ಸಾಧನೆ : ನಟ ಚೇತನ್ ಆಕ್ರೋಶ

ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಮೂರು ರಾಜಕೀಯ ಪಕ್ಷಗಳು ಸ್ವಾರ್ಥ ಸಾಧನೆಗಾಗಿ ನಡೆಸುತ್ತಿರುವ ಹೋರಾಟ ಎಂದು ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಚೇತನ್, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರು ಪಕ್ಷಗಳು ಮೇಕೆದಾಟು ಯೋಜನೆಗಾಗಿ ಒಂದಾಗಿ ಹೋರಾಟ ನಡೆಸುತ್ತಿವೆ.

ಕಾಂಟ್ರ್ಯಾಕ್ಟರ್ ಸ್ವಾರ್ಥಕ್ಕಾಗಿ ಇದೆಲ್ಲವೂ ನಡೆಯುತ್ತಿದೆ. 9 ಸಾವಿರ ಕೋಟಿ ರೂಪಾಯಿ ಯೋಜನೆ ಮೂಲಕ 12-18 ಸಾವಿರ ಎಕರೆಯಲ್ಲಿರುವ ಸುಂದರ ಪರಿಸರ ನಾಶ ಮಾಡುತ್ತಿದ್ದಾರೆ. ಸುತ್ತಮುತ್ತಲಿನ ಶ್ರಮಜೀವಿಗಳನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇಕೆದಾಟು ಯೋಜನೆ ಹೆಸರಲ್ಲಿ ಪರಿಸರ ನಾಶ ಮಾಡುವ ಬದಲು ಕೆರೆ, ಕಟ್ಟೆಗಳನ್ನು ಜಾರಿಗೆ ತರಲಿ. ಮಳೆ ನೀರು, ಪೋಲಾಗುತ್ತಿರುವ ನೀರಿನ ಮರು ಬಳಕೆಗೆ ಯೋಜನೆ ರೂಪಿಸಲಿ. ರಾಜಕೀಯ ಪಕ್ಷಗಳು ತಮಿಳುನಾಡು ವಿರುದ್ಧ ಹೋರಾಟ ನಡೆಸುತ್ತಿಲ್ಲ ಅದರ ಬದಲಾಗಿ ಪ್ರಕೃತಿ, ಪರಿಸರದ ವಿರುದ್ಧವೇ ಯುದ್ಧ ಸಾರಿವೆ. ಈ ಯೋಜನೆಯನ್ನು ಪರಿಸರವಾದಿಗಳು ವಿರೋಧಿಸುತ್ತೇವೆ. ಪರಿಸರ ಸಂರಕ್ಷಣೆ ಮೊದಲ ಆದ್ಯತೆ. ರಾಜ್ಯ ಸರ್ಕಾರ ಮೇಕೆದಾಟು ಯೋಜನೆಯನ್ನು ಕೈಬಿಡಬೇಕು. ಪರಿಸರ ಉಳಿವಿಗಾಗಿ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.