ಕಾಂಗ್ರೆಸ್‍ಗೆ ದಮ್ಮು, ತಾಕ್ಕತ್ತಿದ್ದರೆ ಸಿಎಂ ಅಭ್ಯರ್ಥಿ ಬಹಿರಂಗಪಡಿಸಲಿ

ಬೆಂಗಳೂರು: ದೇಶದಲ್ಲಿ ಮಣ್ಣು ಮುಕ್ಕುತ್ತಿರುವ ಕಾಂಗ್ರೆಸ್‍ಗೆ ಬಿಜೆಪಿ ಬದಲಾವಣೆ ಬಗ್ಗೆ ಮಾತನಾಡಲು ಯಾವ ಅಧಿಕಾರವಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರಶ್ನಿಸಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ಗೆ ದೇಶದಲ್ಲಿ ತಳವಿಲ್ಲದಂತಾಗಿದೆ.

ಆಗಿದ್ದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಬಿಜೆಪಿಯಲ್ಲಿನ ಬದಲಾವಣೆ ಬಗ್ಗೆ ಮಾತನಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದರು.

ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಸಮಾವೇಶದ ಬಳಿಕ ಕಾಂಗ್ರೆಸ್‍ನಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಸಿದ್ದರಾಮಯ್ಯ ಅವರ ನಡುವೆ ಒಳ ಜಗಳ ನಡೆಯುತ್ತಿದೆ. ಮೂಲ ಕಾಂಗ್ರೆಸಿಗರು ಸಭೆ ಮಾಡಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಹೇಳಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಒಳ ಜಗಳ ಸಮಾವೇಶದ ನಂತರ ಬೀದಿಗೆ ಬಂದಿದೆ. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಮೇಶ್‍ಕುಮಾರ್, ಎಂ.ಬಿ.ಪಾಟೀಲ್ ಅವರ ನಡುವಿನ ಅಸಮಾಧಾನವೂ ಬಹಿರಂಗಗೊಂಡಿದೆ. ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಹೆಸರಿನಲ್ಲಿ ಡಿ.ಕೆ.ಶಿವಕುಮಾರ್ ಪಾದಯಾತ್ರೆ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ ಎಂದರು.

ಬೀದಿಗೆ ಬಂದಿರುವ ಕಾಂಗ್ರೆಸ್‍ನ ಒಳ ಜಗಳವನ್ನು ಮುಚ್ಚಿಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಟೀಕಿಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನು ಮಾಡಲು ಯೋಗ್ಯತೆ ಇಲ್ಲದೆ ಯಾರನ್ನು ಮಾಡಬೇಕೆಂದು ಬೀದಿ ಬೀದಿ ಅಲೆಯುತ್ತಿದ್ದಾರೆ. 21 ಮಂದಿ ರಾಷ್ಟ್ರೀಯ ನಾಯಕರು ತಿರುಗಿ ಬಿದ್ದಿದ್ದಾರೆ. ಅಧ್ಯಕ್ಷರನ್ನು ಮಾಡಿಕೊಳ್ಳಲು ಯೋಗ್ಯತೆ ಇಲ್ಲದವರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುತ್ತಾರೆ ಎಂದು ಹರಿಹಾಯ್ದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬದಲಾವಣೆ ಬಗ್ಗೆ ಇವರೊಂದಿಗೆ ಹೇಳಿದ್ದರೆ. ಇವರಿಗೂ ಬಿಜೆಪಿಗೂ ಏನು ಸಂಬಂಧ ? ಈಗಾಗಲೇ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆಗೆ ಹೋಗುವುದಾಗಿ ಹೇಳಿದ್ದಾರೆ. ಹುಟ್ಟುಹಬ್ಬ, ರ್ಯಾಲಿ ಹೆಸರಿನಲ್ಲಿ ಜಗಳವಾಡುತ್ತಿದ್ದಾರೆ. ಮೊದಲು ಅವರ ಪಕ್ಷದ ಗೊಂದಲ ಸರಿಮಾಡಿಕೊಳ್ಳಲಿ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಹಾಗೂ ಸಿಎಂ ಸ್ಥಾನದಲ್ಲಿ ಬದಲಾವಣೆ ಆಗುವುದಿಲ್ಲ. ಅವರಿಬ್ಬರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಹೇಳಿದರು