ಪ್ರತಿ ಭಾರತೀಯನಿಗೆ ಸಂವಿಧಾನ ಮತ್ತು ಕಾನೂನು ಅನ್ವಯ ಆಗುತ್ತದೆ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್‍ನ ವಿಶೇಷತೆ ಏನು? ಅವರು ಪ್ರಶ್ನಾತೀತರೇ?  ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಮತ್ತು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು. ಜಗನ್ನಾಥ ಭವನ’ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ.ನೋಟಿಸ್‍ಗೆ ಒಂದು ರಾಷ್ಟ್ರೀಯ ಪಕ್ಷ ಬೀದಿಗಿಳಿದು ಹೋರಾಡುತ್ತದೆ ಎಂದರೆ ಅದಕ್ಕೆ ಅರ್ಥ ಇದೆಯೇ? ಇ.ಡಿ. ಇವತ್ತು ಆರಂಭವಾಗಿದೆಯೇ?

ಇ.ಡಿ. ಕಾಂಗ್ರೆಸ್ ಕಾಲದಲ್ಲೇ ಆರಂಭವಾಗಿತ್ತಲ್ಲವೇ? ನಿಮ್ಮ ಆಡಳಿತಾವಧಿಯಲ್ಲಿ ನೀವು ಇ.ಡಿ, ಸಿಬಿಐ ಅನ್ನು ದುರ್ಬಳಕೆ ಮಾಡಿಕೊಂಡಿ ದ್ದೀರಾ? ಅದರ ನೆನಪೇನಾದರೂ ನಿಮಗಿದೆಯೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ಎಲ್ಲ ಪಕ್ಷದವರು ಈ ದೇಶದ ಕಾನೂನು ಎಲ್ಲರಿಗೂ ಒಂದೇ ಎಂದು ತಿಳಿದಿದ್ದಾರೆ. ಅನೇಕ ಸಂದರ್ಭಗಳಲ್ಲಿ ತಪ್ಪುಗಳಾದಾಗ ಇ.ಡಿ., ಸಿ.ಬಿ.ಐ.ನಂಥ ಸಂಸ್ಥೆಗಳನ್ನು ಎದುರಿಸಿ ಸಮಸ್ಯೆಗಳನ್ನು ಪರಿಹರಿಸಿಕೊಂಡಿದ್ದಾರೆ. ಕಾನೂನು ಬಿಜೆಪಿಗೆ ಒಂದು, ಜೆಡಿಎಸ್‍ಗೆ ಇನ್ನೊಂದು ಮತ್ತು ಕಾಂಗ್ರೆಸ್‍ಗೆ ಮತ್ತೊಂದು ಎಂದು ಇರುವುದಿಲ್ಲ. ಪ್ರತಿ ಭಾರತೀಯನಿಗೆ ಸಂವಿಧಾನ ಮತ್ತು ಕಾನೂನು ಅನ್ವಯ ಆಗುತ್ತದೆ ಎಂದು ಹೇಳಿದ್ದಾರೆ.