ಮಕ್ಕಳಿಗೆ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಸಿಗಬೇಕು: ಉಪ ರಾಷ್ಟ್ರಪತಿ

ನವದೆಹಲಿ: ಮಾತೃಭಾಷೆಯಲ್ಲೇ ಕೋರ್ಟ್ ಕಲಾಪ ನಡೆಯುವ ಕುರಿತ ಪ್ರಧಾನಿ ಮೋದಿ ಹೇಳಿಕೆ ಬೆನ್ನಲ್ಲೇ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರೂ ಕೂಡ ಮಾತೃಭಾಷೆಗೆ ಒತ್ತು ನೀಡುವ ಕುರಿತು ಮಾತನಾಡಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ನಾಯ್ಡು ಅವರು, ‘ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲಿಯೇ ದೊರೆಯಬೇಕು. ಭಾರತೀಯ ಶಿಕ್ಷಣ ವ್ಯವಸ್ಥೆಯು ‘ನಮ್ಮ ಸಂಸ್ಕೃತಿ’ ಮೇಲೆಯೇ ಕೇಂದ್ರೀಕೃತವಾಗಿರಬೇಕು ಎಂದು ಒತ್ತಾಯಿಸಿದ್ದಾರೆ.

‘ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡಿದರೆ, ಚೆನ್ನಾಗಿ ಗ್ರಹಿಸಿಕೊಳ್ಳಬಲ್ಲರು. ಒಂದುವೇಳೆ ಬೇರೆ ಭಾಷೆಯಲ್ಲಿ ನೀಡುವುದಾದರೆ, ಮೊದಲು ಅವರು (ಮಕ್ಕಳು) ಆ ಭಾಷೆಯನ್ನೇ ಕಲಿಯಬೇಕಾಗುತ್ತದೆ. ನಂತರವಷ್ಟೇ ವಿಷಯ ಅರ್ಥ ಮಾಡಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯಲ್ಲಿ ಪ್ರೌಢಿಮೆ ಹೊಂದಿರಬೇಕು. ಮೂಲ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಹೇಳಿದರು.

ನಿನ್ನೆಯಷ್ಟೇ ಮಾತೃಭಾಷೆ ವಿಚಾರವಾಗಿ ಮಾತನಾಡಿದ್ದ ಪ್ರಧಾನಿ ಮೋದಿ, ‘ಕಾನೂನು ಸ್ಥಳೀಯ ಭಾಷೆಯಲ್ಲಿ ಲಭ್ಯವಾಗದಿದ್ದರೆ ನ್ಯಾಯದ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದ್ದರು. ಪ್ರಧಾನಿ ಮೋದಿ ಅವರ ಈ ಹೇಳಿಕೆಯನ್ನೇ ಉಲ್ಲೇಖಿಸಿದ ವೆಂಕಯ್ಯ ನಾಯ್ಡು ಅವರು, ‘ಪ್ರಧಾನಿ ಮೋದಿ ಅವರು, ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಬಳಸುವುದರ ಅಗತ್ಯತೆಯ ಬಗ್ಗೆ ನಿನ್ನೆ (ಏ.30) ಮಾತನಾಡಿದ್ದಾರೆ. ನ್ಯಾಯಾಲಯಗಳಷ್ಟೇ ಏಕೆ, ಇದು ಎಲ್ಲೆಡೆ ಜಾರಿಯಾಗಬೇಕು’ ಎಂದು ಒತ್ತಿಹೇಳಿದರು.

Related ಸುದ್ದಿ