ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಎಚ್.ವಿಶ್ವನಾಥ್..!

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿರುವ ಶಾಸಕ ಎಚ್.ವಿಶ್ವನಾಥ್, ಒಂದು ವೇಳೆ ತಮ್ಮ ರಾಜೀನಾಮೆ ಅಂಗೀಕರಿಸದಿದ್ದರೆ ಶಾಸಕತ್ವವೂ ಬೇಡ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ರಾಜೀನಾಮೆಯನ್ನು ಜೆಡಿಎಸ್ ವರಿಷ್ಠರು ಅಂಗೀಕರಿಸದಿದ್ದರೆ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಚಿಂತನೆ ನಡೆಸುವುದಾಗಿ ತಿಳಿಸಿದ್ದಾರೆ.

ಜೆಡಿಎಸ್ ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಬೇಕೆಂದುಮನವಿ ಮಾಡಿದ್ದಾರೆ. ಮಂತ್ರಿಯಾಗಿದ್ದವರು ರಾಜಾಧ್ಯಕ್ಷ ಸ್ಥಾನ ಮತ್ತು ಮಂತ್ರಿಸ್ಥಾನ ಎರಡನ್ನೂ ನಿಭಾಯಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷ ಸ್ಥಾನವನ್ನು ನಿಭಾಯಿಸುವ ಸಾಮಥ್ರ್ಯ ಕುಮಾರಸ್ವಾಮಿ ಅವರಿಗಿದೆ.

ಹೀಗಾಗಿ ತಮ್ಮ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಮಾಧ್ಯಮದ ಮೂಲಕ ಮನವಿ ಮಾಡಿದರು. ನನ್ನ ಅನುಭವವನ್ನು ಮುಖ್ಯಮಂತ್ರಿಯಾಗಲಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲಿ ಬಳಸಿಕೊಂಡಿಲ್ಲ. ಒಬ್ಬ ನಾಯಕನನ್ನು ರಾಜಕೀಯವಾಗಿ ಕೊಲ್ಲುವುದು ಒಳ್ಳೆಯದಲ್ಲ. ಸಿಎಂ ಜೊತೆ ಕೆಲಸ ಮಾಡಬೇಕೆಂಬ ಆಸೆ ಇತ್ತು. ಆದರೆ ಸನ್ನಿವೇಶ ಅದಕ್ಕೆ ಆಸ್ಪದ ಕೊಟ್ಟಿಲ್ಲ ಎಂದರು.

ಶಿಕ್ಷಣ ಇಲಾಖೆಯನ್ನು ನಿರ್ಲಕ್ಷ್ಯ ಮಾಡುವ ಸರ್ಕಾರವನ್ನು ಜನತೆ ಕ್ಷಮಿಸುವುದಿಲ್ಲ ಎಂದ ಅವರು, ನಾನು ಕಾಂಗ್ರೆಸ್‍ನಲ್ಲೇ ಇದ್ದಿದ್ದರೆ ಮಾಜಿ ಸಚಿವ ರೋಷನ್‍ಬೇಗ್ ಅವರಿಗೆ ಆದ ಸ್ಥಿತಿಯೇ ನನಗೂ ಬರುತ್ತಿತ್ತು ಎಂದು ಹೇಳಿದರು.

Tags