ಅಫ್ಘಾನಿಸ್ತಾನಕ್ಕೆ $144 ಮಿಲಿಯನ್ ಹಣಕಾಸು ನೆರವು ಘೋಷಿಸಿದ ಅಮೆರಿಕ

ವಾಷಿಂಗ್ಟನ್(ಅಮೆರಿಕ): ಮಾನವೀಯ ನೆಲೆಯಲ್ಲಿ ಅಮೆರಿಕ ಸುಮಾರು 144 ಮಿಲಿಯನ್ ಅಮೆರಿಕನ್ ಡಾಲರ್​ ಅನ್ನು ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನಕ್ಕೆ ನೀಡಲಿದೆ ಎಂದು ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್​​ (ವಿದೇಶಾಂಗ ಸಚಿವ) ಟೋನಿ ಬ್ಲಿಂಕೆನ್ ಘೋಷಿಸಿದ್ದಾರೆ.

ಈ ಸಹಾಯವನ್ನು ನೇರವಾಗಿ ಅಫ್ಘಾನಿಸ್ತಾನಕ್ಕೆ ನೀಡದೇ, ವಿಶ್ವಸಂಸ್ಥೆಯ ವಿವಿಧ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳಾದ ವಿಶ್ವಸಂಸ್ಥೆಯ ಹೈಕಮಿಷನರ್ (UNHCR), ವಿಶ್ವಸಂಸ್ಥೆಯ ಮಕ್ಕಳ ನಿಧಿ (UNICEF), ವಲಸೆಗಾಗಿ ಅಂತರರಾಷ್ಟ್ರೀಯ ಸಂಸ್ಥೆ (IOM) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಮೂಲಕ ನೆರವು ಒದಗಿಸಲು ಅಮೆರಿಕ ಮುಂದಾಗಿದೆ.

ಅಮೆರಿಕ ನೀಡುತ್ತಿರುವ ಈ ಹಣದಿಂದ ನೆರೆಯ ದೇಶಗಳಲ್ಲಿನ ಆಫ್ಘನ್ ನಿರಾಶ್ರಿತರನ್ನು ಒಳಗೊಂಡಂತೆ ಸುಮಾರು 18 ಮಿಲಿಯನ್‌ಗಿಂತಲೂ ಹೆಚ್ಚು ದುರ್ಬಲ ಆಫ್ಘನ್ನರಿಗೆ ಸಹಾಯವಾಗಲಿದೆ. ಈವರೆಗೆ ಸುಮಾರು 474 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಅಮೆರಿಕ ಅಫ್ಘಾನಿಸ್ತಾನಕ್ಕೆ ನೆರವಾಗಿ ಘೋಷಿಸಿದೆ. ಇದು ಬೇರೆ ರಾಷ್ಟ್ರಗಳು ನೀಡಿರುವ ಸಹಾಯಕ್ಕಿಂತ ಅತ್ಯಂತ ದೊಡ್ಡದು ಎಂದು ಬ್ಲಿಂಕೆನ್ ಹೇಳಿದ್ದಾರೆ.

ಅಲ್ಲಿನ ಜನರಿಗೆ ರಕ್ಷಣೆ, ಆಹಾರ ಭದ್ರತೆ, ಆರೋಗ್ಯ, ಚಳಿಗಾಲಕ್ಕೆ ನೆರವು ಮತ್ತು ತುರ್ತು ಸಮಯಗಳಿಗೆ ಈ ಸಹಾಯವನ್ನು ನೀಡಲಾಗುತ್ತಿದೆ. ನಾವು ನೀಡುತ್ತಿರುವ ಸಹಾಯ ಅಲ್ಲಿನ ಜನರಿಗಲ್ಲದೆ ತಾಲಿಬಾನ್​ಗಲ್ಲ ಎಂದು ಬ್ಲಿಂಕನ್ ಸ್ಪಷ್ಟಪಡಿಸಿದ್ದಾರೆ.