ಅಫ್ಘಾನ್‌ನಲ್ಲಿ ವಿದೇಶಿ ಕರೆನ್ಸಿ ಬಳಕೆಯನ್ನು ನಿಷೇಧಿಸಿದ ತಾಲಿಬಾನ್‌

ಅಫ್ಘಾನಿಸ್ತಾನದಲ್ಲಿ ವಿದೇಶಿ ಕರೆನ್ಸಿ ಬಳಕೆಯನ್ನು ನಿಷೇಧ ಮಾಡಲಾಗಿದೆ ಎಂದು ಅಫ್ಘಾನಿಸ್ತಾನದಲ್ಲಿ ಸರ್ಕಾರ ನಡೆಸುತ್ತಿರುವ ತಾಲಿಬಾನ್‌ ಹೇಳಿದೆ. ಈಗಾಗಲೇ ಯುದ್ಧ ಪೀಡಿತ ಅಫ್ಘಾನಿಸ್ತಾನದ ಆರ್ಥಿಕ ಪರಿಸ್ಥಿತಿಯು ಭಾರೀ ಹದಗೆಟ್ಟಿದೆ.

ಈ ನಡುವೆ ಈ ಆರ್ಥಿಕತೆಗೆ ಮತ್ತಷ್ಟು ಅಡ್ಡಿಪಡಿಸುವ ಬೆದರಿಕೆ ಹಾಕುತ್ತಿದೆ.

ಯುಎಸ್‌ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯುತ್ತಿದ್ದಂತೆ ತಾಲಿಬಾನ್‌ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದೆ. ಕ್ಷೀಪ್ರವಾಗಿ ಅಫ್ಘಾನಿಸ್ತಾನದ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆಯುತ್ತಾ ಬಂದ ತಾಲಿಬಾನ್‌ ಕಳೆದ ಆಗಸ್ಟ್‌ನಲ್ಲಿ ಕಾಬೂಲ್‌ ಅನ್ನು ತನ್ನ ತೆಕ್ಕೆಗೆ ಪಡೆಯುವ ಮೂಲಕ ಸಂಪೂರ್ಣವಾಗಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ. ಈಗ ಸರ್ಕಾರವನ್ನು ತಾಲಿಬಾನ್‌ ರಚನೆ ಮಾಡಿದೆ.

ಆದರೆ ಭಯೋತ್ಪಾದಕ ಗುಂಪು ಎಂದು ಗುರುತಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆಯಲದಿರುವ ತಾಲಿಬಾನ್‌, ಅಫ್ಘಾನಿಸ್ತಾನದಲ್ಲಿ ತನ್ನ ಸರ್ಕಾರ ಆರಂಭ ಮಾಡಿದಾಗಿನಿಂದ ತನ್ನದೇ ಆದ ನಿಯಮಗಳನ್ನು ಶರಿಯತ್‌ ನೆಪದಲ್ಲಿ ಜಾರಿ ಮಾಡುತ್ತಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದ ಬಳಿಕ ಅಫ್ಘಾನಿಸ್ತಾನದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಕಂಡು ಬಂದಿದೆ. ಈ ನಡುವೆ ದೇಶದ ಸಂಪತ್ತು ವಿದೇಶದ ಬ್ಯಾಂಕ್‌ಗಳಲ್ಲಿ ಇದೆ. ತಾಲಿಬಾನ್ ಸರ್ಕಾರವನ್ನು ಅಫ್ಘಾನಿಸ್ತಾನದ ಸರ್ಕಾರ ಎಂದು ಅಂತಾರಾಷ್ಟ್ರೀಯವಾಗಿ ಪರಿಗಣಿಸದ ಕಾರಣದಿಂದಾಗಿ ವಿದೇಶದಲ್ಲಿರುವ ಅಫ್ಘಾನ್‌ ಹಣವನ್ನು ಅಂತಾರಾಷ್ಟ್ರೀಯ ಬ್ಯಾಂಕುಗಳು ತಡೆದು ಹಿಡಿದಿದೆ.