ಅಫ್ಘಾನಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಪೋಟ

ಕಾಬೂಲ್: ಕಳೆದ ಶುಕ್ರವಾರದ ರಕ್ತದ ಕಲೆ ಮಾಸುವ ಮುನ್ನವೇ ಮತ್ತೆ ಅಫ್ಘಾನಿಸ್ತಾದನ ಶಿಯಾ ಮಸೀದಿ ಮೇಲೆ ಉಗ್ರರ ಕರಿನೆರಳು ಬಿದ್ದಿದೆ. ಈ ದಾಳಿಯಲ್ಲಿ ಸುಮಾರು 16 ಜನರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಶುಕ್ರವಾರದ ನಮಾಜ್ ವೇಳೆಯೇ ಸ್ಫೋಟ ಸಂಭವಿಸಿದೆ. ಕಳೆದ ಶುಕ್ರವಾರ ನಡೆದ ಬಾಂಬ್ ದಾಳಿಯಲ್ಲಿ ಸುಮಾರು 100 ಜನರು ಸಾವನ್ನಪ್ಪಿದ್ದರು. ಕಂದಹಾರ (Kandahar) ನಗರದ ಫತೇಮೇಹ ಇಮಾಮ್ ಬಾರ್ಗಾದಲ್ಲಿ (Bibi Fatima Mosque Attack) ಸ್ಫೋಟಕ ಸ್ಫೋಟಗೊಂಡಿದೆ. ಸದ್ಯ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ.

ಸ್ಥಳೀಯ ವರದಿಗಳ ಪ್ರಕಾರ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಶುಕ್ರವಾರ ಆಗಿದ್ದರಿಂದ ನಮಾಜ್‍ಗಾಗಿ ಹೆಚ್ಚು ಜನರು ಸೇರಿದ್ದರು. ಹಾಗಾಗಿ ಅಧಿಕಾರಿಗಳು ಸಹ ಸಾವಿನ ಸಂಖ್ಯೆ ಹೇಳಲು ಹಿಂದೇಟು ಹಾಕುತ್ತಿದ್ದಾರೆ. ಇದುವರೆಗೂ ಯಾವ ಉಗ್ರ ಸಂಘಟನೆಯ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಸ್ಫೋಟ ನಡೆದಾಗ ನಮಾಜ್ ನಡೆಯುತ್ತಿತ್ತು. ಈ ಸಮಯದಲ್ಲಿ ಎಷ್ಟು ಜನರಿದ್ದರು ಎಂಬುವುದು ನಿಖರವಾಗಿ ಗೊತ್ತಿಲ್ಲ. ಸ್ಫೋಟವಾಗುತ್ತಿದ್ದಂತೆ ಜನ ಮಸೀದಿಯಿಂದ ಹೊರಗೆ ಬಂದರು. ಈ ಸಮಯದಲ್ಲಿ ಕಾಲ್ತುಳಿತ ಸಹ ಉಂಟಾಗಿತ್ತು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಇದುವರೆಗೂ ಮಸೀದಿಯಲ್ಲಿ ನಡೆದ ದಾಳಿಯ ಜವಾಬ್ದಾರಿಯನ್ನು ಯಾವ ಸಂಘಟನೆ ಹೊತ್ತುಕೊಂಡಿಲ್ಲ. ತಾಲಿಬಾನಿಗಳ ವಿರೋಧಿಗಳೇ ಈ ದಾಳಿಯನ್ನು ನಡೆಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಸ್ಫೋಟದ ಹಿಂದೆ ಅಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿರುವ ಐಸಿಸ್ -ಕೆ (ISIS-K) ಬಗ್ಗೆ ಶಂಕೆ ವ್ಯಕ್ತವಾಗಿದೆ. ಐಸಿಸ್ ಶಿಯಾ ಮುಸ್ಲಿಮರನ್ನು ವಿರೋಧಿಸಿಕೊಂಡು ಬರುತ್ತಿದೆ. ಇದರ ಜೊತೆಗೆ ಹಜಾರಾ ಮತ್ತು ಇನ್ನುಳಿದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಐಸಿಸ್-ಕೆ ವಿರೋಧಿಸುತ್ತಿದೆ.

ಕಳೆದ ಶುಕ್ರವಾರ ಅಫ್ಘಾನಿಸ್ತಾದ ಕುಂದುಜ್ ನಗರದ ಮಸೀದಿ ಮೇಲೆ ದಾಳಿ ನಡೆಸಲಾಗಿತ್ತು. ನಮಾಜ್ ಮಾಡುತ್ತಿದ್ದ ವೇಳೆಯೇ ಮಸೀದಿಯ ಒಳಭಾಗದಲ್ಲಿಯೇ ಸ್ಫೋಟವಾಗಿತ್ತು. ಸ್ಫೋಟದ ವೇಳೆ ಮಸೀದಿಯಲ್ಲಿ ಸುಮಾರು 300 ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಕಳೆದ ಶುಕ್ರವಾರದ ದಾಳಿಯ ಹೊಣೆಯನ್ನು ಉಗ್ರವಾದಿ ಸಂಘಟನೆ ಐಸಿಸ್ ತೆಗೆದುಕೊಂಡಿತ್ತು. ಶಿಯಾ ಮುಸ್ಲಿಮರು ಮತ್ತು ಅವರ ಧಾರ್ಮಿಕ ಆಚರಣೆಯ ಕೇಂದ್ರಗಳು ನಮ್ಮ ಗುರಿ ಎಂದು ಐಸಿಸ್ ಹೇಳಿಕೊಂಡಿತ್ತು. ಇದೊಂದು ಆತ್ಮಾಹುತಿ ದಾಳಿಯಾಗಿತ್ತು. ಅಫ್ಘಾನಿಸ್ತಾನವನ್ನು ತಾಲಿಬಾನಿಗಳ ವಶಕ್ಕೆ ಪಡೆದ ನಂತರ ದೊಡ್ಡ ಪ್ರಮಾಣದ ಉಗ್ರರ ದಾಳಿ ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದನ್ನು ಆತ್ಮಾಹುತಿ ದಾಳಿ ಎಂದು ಕುಂದೂಜ್ ನಗರದ ಸಂಸ್ಕøತಿ ಮತ್ತು ಸೂಚನಾ ನಿರ್ದೇಶಕ ಮತಿಉಲ್ಲಾಹ ರೋಹಾನಿ ಹೇಳಿದ್ದರು.