9 ವರ್ಷದ ಮಗಳನ್ನು 55 ವರ್ಷದವನಿಗೆ ಮಾರಿದ ತಂದೆ

ತಾಲಿಬಾನ್ (Taliban) ವಶವಾದ ನಂತರ ಅಫ್ಘಾನಿಸ್ತಾನ (Afghanistan) ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಜನರು ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅದರಲ್ಲೂ ಹೆಣ್ಣುಮಕ್ಕಳ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಸರಿಯಾದ ನಿದ್ರೆ, ಒಂದು ಹೊತ್ತಿನ ಊಟವು ಸಿಗದೆ ಹಲವು ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಇಂತಹ ಸನ್ನಿವೇಷದಲ್ಲಿ ತಂದೆಯೊಬ್ಬ ತನ್ನ 9 ವರ್ಷದ ಬಾಲಕಿಯನ್ನು 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಕಷ್ಟದ ಜೀವನವಿರುವಾಗ ಮಗಳನ್ನು ನೋಡಿಕೊಳ್ಳಲು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ಮಾರಾಟ ಮಾಡಿದ್ದಾನೆ.

ಕುಟುಂಬ ನಿರ್ವಹಣೆಗಾಗಿ ಕಷ್ಟಪಡುವ ತಂದೆ!

ಮಗಳನ್ನು ಮಾರಿದ ತಂದೆಯ ಹೆಸರು ಅಬ್ದುಲ್ ಮಲಿಕ್ ಎಂದಾಗಿದ್ದು, ಆತ ತನ್ನ 9 ವರ್ಷದ ಪರ್ವಾನಾ ಮಲಿಕ್ ಹೆಸರಿನ ಮಗಳನ್ನು ಮಧ್ಯವಯಸ್ಕ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾನೆ. ಅಬ್ದುಲ್ ಮಲಿಕ್ ಅವರ ಕುಟುಂಬದಲ್ಲಿ ಎಂಟು ಜನರಿದ್ದು, ಎಲ್ಲರೂ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗದೆ ಕಷ್ಟಪಡುತ್ತಿರುವ ಅಬ್ದುಲ್​ ಕೊನೆಗೆ ಮಗಳನ್ನು ಮಾರಾಟ ಮಾಡುವ ಯೋಚನೆಗೆ ಬಂದಿದ್ದಾನೆ. ಕೊನೆಗೆ 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ.

ಬಿಕ್ಕಿ ಬಿಕ್ಕಿ ಅತ್ತ ಅಬ್ದುಲ್​ ಮಲಿಕ್​

ಮಗಳ ಮಾರಾಟ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅಬ್ದುಲ್ ಮಲಿಕ್ ಅಳುತ್ತಾ ಮಾತನಾಡಿದ್ದಾನೆ. ಈಗ ಇದು ನಿಮ್ಮ (ಕೊರ್ಬಾನ್) ವಧು, ದಯವಿಟ್ಟು ಅವಳನ್ನು ನೋಡಿಕೊಳ್ಳಿ, ಈಗ ಆಕೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು, ಅವಳನ್ನು ಕೊಲ್ಲಬೇಡಿ’ ಎಂದು ಅಬ್ದುಲ್ ಮಲಿಕ್ ಹೇಳಿದ್ದಾನೆ.