ಕೇರಳದಲ್ಲಿ ಶಿಗೆಲ್ಲಾ ಸೋಂಕು ಪತ್ತೆ

ಕೋಝಿಕ್ಕೋಡ್​, ಕೇರಳ: ಶಿಗೆಲ್ಲಾ ಸೋಂಕು ಮತ್ತೆ ಕೇರಳದಲ್ಲಿ ಕಾಣಿಸಿಕೊಂಡಿದೆ. ಕೋಝಿಕ್ಕೋಡ್​ನ ಪುಥಿಯಪ್ಪ ಎಂಬಲ್ಲಿ ಶಿಗೆಲ್ಲಾ ಸೋಂಕು ಬುಧವಾರ ಕಾಣಿಸಿಕೊಂಡಿದೆ. ಏಳು ವರ್ಷದ ಬಾಲಕಿಯಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಕಾಣಿಸಿಕೊಂಡಿದ್ದು, ಏಪ್ರಿಲ್ 21 ಮತ್ತು 22ರಂದು ಬಾಲಕಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಆರೋಗ್ಯ ತಜ್ಞರು ಹೇಳುವಂತೆ ಸೋಂಕು ಆಕೆಯಿಂದ ಬೇರೆಯವರಿಗೆ ಹರಡಿಲ್ಲ.

ನೆರೆಮನೆಯ ಮತ್ತೊಬ್ಬ ಮಗುವಿಗೂ ಕೂಡಾ ಶಿಗೆಲ್ಲಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದು, ಬಾಲಕಿ ತಲಕ್ಕುಳತ್ತೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಇಬ್ಬರಿಗೂ ಮಕ್ಕಳಿಗೂ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆ ಇಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶಿಗೆಲ್ಲಾ ಹೇಗೆ ಬರುತ್ತದೆ? ಲಕ್ಷಣಗಳೇನು?: ಶಿಗೆಲ್ಲಾ ಗುಂಪಿಗೆ ಸೇರಿದ ಬ್ಯಾಕ್ಟೀರಿಯಾದಿಂದ ಶಿಗೆಲ್ಲಾ ಉಂಟಾಗುತ್ತದೆ. ಕಲುಷಿತ ನೀರು ಮತ್ತು ಅಶುಚಿಯಾದ ಆಹಾರದಿಂದ ಈ ಸೋಂಕು ಹರಡುತ್ತದೆ. ಈ ರೋಗದ ಮುಖ್ಯ ಲಕ್ಷಣಗಳೆಂದರೆ ಅತಿಸಾರ, ಜ್ವರ, ಕಿಬ್ಬೊಟ್ಟೆಯ ನೋವು, ವಾಂತಿ, ಆಯಾಸ. ಶಿಗೆಲ್ಲಾ ಬ್ಯಾಕ್ಟೀರಿಯಾವು ಮುಖ್ಯವಾಗಿ ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅತಿಸಾರದ ಜೊತೆಗೆ ರಕ್ತಸ್ರಾವ ಕೂಡಾ ಉಂಟಾಗುತ್ತದೆ.