ಬೆಂಗಳೂರಲ್ಲಿ ಮತ್ತೆ ಏರಿಕೆಯಾದ ಕೋವಿಡ್

ಬೆಂಗಳೂರು : ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದರೆ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡಿದೆ. ಇಂದು 22,966 ಪಾಸಿಟಿವ್ ಪ್ರಕರಣ ದೃಢಪಟ್ಟಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಶನಿವಾರ, ಭಾನುವಾರ ವೀಕೆಂಡ್ ಕರ್ಫ್ಯೂ ದಿನಗಳಾಗಿದ್ದರಿಂದ ಹೆಚ್ಚು ಜನ ಹೊರಗೆ ಬಾರದೇ ಟೆಸ್ಟಿಂಗ್ ಕಡಿಮೆಯಾದ ಕಾರಣದಿಂದಲೂ ಸೋಮವಾರ 18622 ಪ್ರಕರಣ ಪತ್ತೆಯಾಗಿದ್ದವು. ಆದ್ರೆ, ಇಂದು ಮತ್ತೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಇಂದು ಬೊಮ್ಮನಹಳ್ಳಿ ವಲಯದಲ್ಲಿ 2725, ದಾಸರಹಳ್ಳಿ 590, ಬೆಂಗಳೂರು ಪೂರ್ವ 3661, ಮಹದೇವಪುರ 3020, ಆರ್‌ಆರ್‌ನಗರ 1672, ದಕ್ಷಿಣ ವಲಯ 3549, ಪಶ್ಚಿಮ 2232, ಯಲಹಂಕ 1489, ಅನೇಕಲ್ 950, ಬೆಂಗಳೂರು ಹೊರವಲಯ 1204 ಸೇರಿ ಒಟ್ಟು 22966 ಪಾಸಿಟಿವ್ ಪ್ರಕರಣ ಕಂಡು ಬಂದಿವೆ.

ಜನವರಿ 13ರಂದು 18,324, ಜ.14 ರಂದು 20121, ಜ.15ರಂದು 22284, ಜ.16ರಂದು 21071 ಪ್ರಕರಣ ದೃಢಪಟ್ಟಿದ್ದವು. 22,966 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಮೆಟ್ರೋ, ಬಿಎಂಟಿಸಿ ಸಿಬ್ಬಂದಿಗೆ ಕೊರೊನಾ ಕಂಟಕ:

ನಗರದ ಪ್ರಮುಖ ಸಾರಿಗೆ ಸಂಸ್ಥೆಗಳಾದ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಸಿಬ್ಬಂದಿಯಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಸಾಕಷ್ಟು ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ಕಂಡು ಬಂದಿವೆ.

ಕಳೆದ ಕೆಲ ದಿನಗಳಲ್ಲಿ ಎರಡು ನಿಗಮಗಳಲ್ಲಿ ಒಟ್ಟು 250 ಸಿಬ್ಬಂದಿಗೆ ಪಾಸಿಟಿವ್ ದೃಢಪಟ್ಟಿದೆ. ಬಿಎಂಟಿಸಿಯಲ್ಲಿ ಈವರೆಗೆ 163 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಮೆಟ್ರೋ ನಿಗಮದ 87 ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ವಾರ ಕೇಂದ್ರ ಕಚೇರಿಯ 7 ಸಿಬ್ಬಂದಿಗೆ ಪಾಸಿಟಿವ್ ಬಂದಿತ್ತು. ಹೀಗಾಗಿ, ಹೆಚ್ಚುವರಿ 380 ಸಿಬ್ಬಂದಿಗೆ ಕೋವಿಡ್ ಟೆಸ್ಟ್ ನಡೆಸಲಾಗಿತ್ತು.

87 ಜನರಿಗೆ ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿದೆ. ಪಾಸಿಟಿವ್ ರೇಟ್ ಹೆಚ್ಚಾದ ಹಿನ್ನೆಲೆಯಲ್ಲಿ ಸದ್ಯ ಅರ್ಧದಷ್ಟು ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೋಂ ಐಸೋಲೇಷನ್, ಸ್ಯಾನಿಟೈಸೇಷನ್ : ನಗರ ಸಾರಿಗೆ ಸಂಸ್ಥೆಯ ಡ್ರೈವರ್, ಕಂಡಕ್ಟರ್, ಮೆಕ್ಯಾನಿಕ್, ಸೆಕ್ಯೂರಿಟಿ ಗಾರ್ಡ್, ಅಧಿಕಾರಿಗಳು ಸೇರಿದಂತೆ 30 ಸಾವಿರ ಸಿಬ್ಬಂದಿ ಇದ್ದಾರೆ. ಈ ಪೈಕಿ‌ 163 ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿದೆ.

ಪಾಸಿಟಿವ್ ಆದ ಸಿಬ್ಬಂದಿಗೆ ಹೋಂ ಐಸೋಲೇಷನ್​​ನಲ್ಲಿರಲು ಸೂಚಿಸಲಾಗಿದೆ. ಎಲ್ಲ ಬಸ್, ನಿಲ್ದಾಣಗಳನ್ನು ಸ್ಯಾನಿಟೈಸ್ ಮಾಡಲು ಆದೇಶಿಸಲಾಗಿದೆ ಎಂದಿದ್ದಾರೆ.