ಕೊರೊನಾ ಹಿನ್ನೆಲೆ ಟೈಟ್​ ರೂಲ್ಸ್​ ಕುರಿತು ಶುಕ್ರವಾರ ಮರು ಪರಿಶೀಲನೆ: ಸಿಎಂ

ಬೆಂಗಳೂರು: ಕರೊನಾ ಮೂರನೇ ಅಲೆಯಲ್ಲಿ ಸೋಂಕು ಸಾಮಾನ್ಯ ಜ್ವರದಂತೆ ಬಂದು ಹೋಗುತ್ತಿದ್ದು, ನಿಯಮಗಳ ಪಾಲನೆ ಜತೆಗೆ ದೈನಂದಿನ ಚಟುವಟಿಕೆಗಳಿಗೆ ಅವಕಾಶ ಸಿಗಬೇಕು ಎನ್ನುವುದು ಜನರ ಭಾವನೆಯಾಗಿದೆ. ಯಾವುದಕ್ಕೂ ತಜ್ಞರು ನೀಡಲಿರುವ ವರದಿಯೇ ಅಂತಿಮವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಕರೊನಾ ಮರು ಪರೀಕ್ಷೆ ವರದಿಯಲ್ಲಿ ನೆಗೆಟಿವ್ ಫಲಿತಾಂಶ ಲಭ್ಯವಾಗಿ ಬೊಮ್ಮಾಯಿ‌ ಸೋಂಕು ಮುಕ್ತರಾಗಿರುವುದು ಖಚಿತಪಟ್ಟಿದ್ದು, 10-12 ದಿನಗಳ ಕ್ವಾರಂಟೈನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಬುಧವಾರದಿಂದ ನಿತ್ಯ ಕರ್ತವ್ಯ, ಸಿಎಂ ಗೃಹ ಕಚೇರಿಯಲ್ಲಿ ಕಾರ್ಯೋನ್ಮುಖರಾಗಲು ನಿರ್ಧರಿಸಿದ್ದಾರೆ. ದೈನಂದಿನ ಕೆಲಸಕ್ಕೆ ತೆರಳುವ ಮುನ್ನ ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಕರೊನಾ ಹಿನ್ನೆಲೆ ನಿರ್ಬಂಧಗಳನ್ನು ಮರು ಪರಿಶೀಲಿಸಲಾಗುವುದು ಎಂದರು.

ವಸ್ತುಸ್ಥಿತಿ ಪರಾಮರ್ಶಿಸಿ ವರದಿ ನೀಡಲು ತಜ್ಞರಿಗೆ ಕೇಳಿದ್ದು, ಅಂದಿನ ಸಭೆಯಲ್ಲಿ ಈ ವರದಿ ಆಧರಿಸಿ ತಜ್ಞರು, ಸಚಿವರು ಹಾಗೂ ಅಧಿಕಾರಿಗಳ ಜತೆಗೆ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ವಿಶೇಷ ನಿಗಾ: ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೂ ಆಸ್ಪತ್ರೆಗಳ ಮೇಲೆ ಒತ್ತಡ ತಗ್ಗಿದೆ. ಹೀಗಾಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ, ಶೇ.95 ಹೋಂ ಐಸೋಲೇಷನ್​ನಲ್ಲಿ ಇರುವವರ ಮೇಲೆ ತೀವ್ರ ನಿಗಾವಹಿಸಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಬೊಮ್ಮಾಯಿ‌ ತಿಳಿಸಿದರು.

ನಿರ್ಬಂಧ ಉಲ್ಲಂಘಿಸಿದವರ ವಿರುದ್ಧ ದಾವೆ ಹೂಡಬೇಕು ಎಂದು ಕಾಂಗ್ರೆಸ್ ದೂರು ಕೊಡುವ ಅವಶ್ಯಕತೆಯಿಲ್ಲ. ಸರ್ಕಾರವೇ ಸ್ವಯಂ ಪ್ರೇರಿತರಾಗಿ ಈ ಕ್ರಮ ವಹಿಸುತ್ತಿದ್ದು,‌ ಸಚಿವ-ಶಾಸಕರು, ಪಕ್ಷ, ಸಂಘಟನೆ ಭೇದವಿಲ್ಲದೆ ಮೊಕದ್ದಮೆ ಹೂಡುವುದಕ್ಕೆ ನಿರ್ದೇಶಿಸಿದ್ದು, ಮುಖ್ಯ ಕಾರ್ಯದರ್ಶಿ ಸಹಿತ ಮತ್ತೊಂದು ಲಿಖಿತ ಸೂಚನೆ‌ ಹೊರಡಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿ‌ ಮಾಹಿತಿ ನೀಡಿದರು.