ಭಾರತದಲ್ಲಿಂದು 80,834 ಹೊಸ ಕೊರೋನಾ ಕೇಸ್ ಪತ್ತೆ, 3,303 ಮಂದಿ ಸಾವು

ನವದೆಹಲಿ: ದೇಶದಾದ್ಯಂತ ಭಾನುವಾರ 80,834 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಭಾನುವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಸತತ 4ನೇ ದಿನವೂ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಜೊತೆಗೆ ಕಳೆದ 71 ದಿನಗಳ ಸೋಂಕಿತರ ಕನಿಷ್ಟ ಸಂಖ್ಯೆ ಇದಾಗಿದೆ.

ಇದೇ ಅವಧಿಯಲ್ಲಿ 3,303 ಮಂದಿ ಮಹಾಮಾರಿ ವೈರಸ್’ಗೆ ಬಲಿಯಾಗಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಶನಿವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,94,39,989ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 3,70,384ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ನಡುವಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆ 10,26,159ಕ್ಕೆ ಇಳಿಕೆಯಾಗಿದೆ.

ಈ ನಡುವೆ ಕಳೆದ 24 ಗಂಟೆಗಳಲ್ಲಿ 1,32,062 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 2,80,43,446ಕ್ಕೆ ತಲುಪಿದೆ.

ಇನ್ನು ಭಾರತದಲ್ಲಿ ಒಂದೇ 19,20,477 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, 37,62,32,162 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್’ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗಿತ್ತು. ಮೇ.1ರಿಂದ 18-45 ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 25,31,95,048 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.