ನನ್ನ ಭೇಟಿ ರಾಜಕೀಯ ಉದ್ದೇಶಕ್ಕೆ ಅಲ್ಲ, ಕೋವಿಡ್ ಪರಿಹಾರ ಕಾರ್ಯ ಮೇಲ್ವಿಚಾರಣೆಗೆ:ಅರುಣ್ ಸಿಂಗ್

ಬೆಂಗಳೂರು: ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೂರು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿದ್ದು, ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ಕೋವಿಡ್ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಲು ತಾವು ಬಂದಿರುವುದಾಗಿ ಹೇಳಿದ್ದಾರೆ.

ಬೆಂಗಳೂರಿಗೆ ಆಗಮಿಸುತ್ತಿದ್ದಂತೆಯೇ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್ ಅವರು, ‘ನಮ್ಮ ಪಕ್ಷದ ಕಾರ್ಯಕರ್ತರು ಸತತವಾಗಿ ಕೋವಿಡ್-19 ಪರಿಹಾರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದನ್ನು ಪರಿಶೀಲಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಅಂತೆಯೇ ಏಕ-ಬಳಕೆಯ ಪ್ಲಾಸ್ಟಿಕ್ ಮತ್ತು ಮುಂಬರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂತಹ ಇತರ ವಿಷಯಗಳ ಬಗ್ಗೆ ಚರ್ಚೆಯನ್ನು ನಡೆಸುತ್ತೇವೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಕೆಲವು ಸಚಿವರ ವಿರುದ್ಧ ದೂರು ನೀಡಲು ಶಾಸಕರು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಅರುಣ್ ಸಿಂಗ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದ ಸಚಿವರು, ಶಾಸಕರ ಜೊತೆ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ. ಜೂನ್ 18ರಂದು ಅರುಣ್ ಸಿಂಗ್ ಅಧ್ಯಕ್ಷತೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಸಹ ನಡೆಯಲಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಇಂಬು ನೀಡುವಂತೆ ಈ ಹಿಂದೆ ಸಚಿವ ಸಿಪಿ ಯೋಗೇಶ್ವರ್ ಮತ್ತು ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ಗೆ ದೂರು ನೀಡಿದ್ದರು ಎಂದು ವರದಿಯಾಗಿತ್ತು. ಇದೀಗ ಇದೇ ವಿಚಾರವಾಗಿ ಶಾಸಕರ ಅಭಿಪ್ರಾಯ ಸಂಗ್ರಹಿಸಲು ಅರುಣ್ ಸಿಂಗ್ ಬಂದಿದ್ದಾರೆ ಎಂದು ಹೇಳಲಾಗಿದೆ.