15 ರಿಂದ 18 ವರ್ಷದವರ ಕೊರೊನಾ ಲಸಿಕೆ ಅಭಿಯಾನದಲ್ಲಿ ಹೊಸ ಮೈಲಿಗಲ್ಲು

15 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭಗೊಂಡು ಕೇವಲ 11 ದಿನಗಳಲ್ಲಿ ಬರೋಬ್ಬರಿ 3.14 ಕೋಟಿ ಮಕ್ಕಳು ಕೊರೊನಾ ಲಸಿಕೆಯ ಮೊದಲ ಡೋಸ್​ ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ದೇಶದಲ್ಲಿ ಜನವರಿ 3ರಂದು 15 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿತ್ತು.

ಈ ತಿಂಗಳ ಅಂತ್ಯದ ವೇಳೆಗೆ 15 ರಿಂದ 17 ವರ್ಷ ವಯಸ್ಸಿನ ಅಂದಾಜು 7.40 ಕೋಟಿ ಮಂದಿಯಲ್ಲಿ 85 ಪ್ರತಿಶತ ಮಕ್ಕಳಿಗೆ ಮೊದಲ ಡೋಸ್​​ ನೀಡಬೇಕು ಎಂಬುದು ಕೇಂದ್ರ ಸರ್ಕಾರದ ಪ್ಲಾನ್​ ಆಗಿದೆ ಎನ್ನಲಾಗಿದೆ. ಕೋವಿನ್​ ಪೋರ್ಟಲ್​ನಲ್ಲಿರುವ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ 3,14,87,269 ಮಂದಿ ಕೊರೊನಾ ಲಸಿಕೆಯ ಮೊದಲ ಡೋಸ್​ ಸ್ವೀಕರಿಸಿದ್ದಾರೆ.

ಕೊರೊನಾ ಲಸಿಕೆ ಸ್ವೀಕರಿಸಿದ ಯುವಜನತೆಯನ್ನು ಶ್ಲಾಘಿಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ ಭಾರತದ ಯುವ ಜನತೆಯಲ್ಲಿ ಹೆಚ್ಚಿನ ಜವಾಬ್ದಾರಿ ಹಾಗೂ ಉತ್ಸಾಹವಿದೆ ಎಂದು ಹೇಳಿದ್ದಾರೆ. ಜೊತೆಯಲ್ಲಿ ಎಲ್ಲಾ ಅರ್ಹ ಫಲಾನುಭವಿಗಳು ಕೊರೊನಾ ಲಸಿಕೆ ಸ್ವೀಕರಿಸುವಂತೆ ಮನವಿ ಮಾಡಿದರು.