50 ಎಕರೆ ಜಮೀನು ಮಾರಿ 8 ಕೋಟಿ ರೂಪಾಯಿ ಖರ್ಚು ಮಾಡಿದರೂ ರೈತ ಕೊರೊನಾಗೆ ಬಲಿ

ಮಹಾಮಾರಿಯ ಅಟ್ಟಹಾಸ ದೇಶದಲ್ಲಿ ಹೆಚ್ಚಾಗುತ್ತಿದೆ. ಹಲವರಿಗೆ ಈ ಸೋಂಕು ಸಾಮಾನ್ಯ ಲಕ್ಷಣದಂತೆ ಕಂಡು ಬಂದರೆ, ಹಲವರು ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲೊಬ್ಬ ವ್ಯಕ್ತಿ ಕೂಡ ಈ ಸೋಂಕಿಗೆ ತುತ್ತಾಗಿ ಆಸ್ತಿಯೆಲ್ಲ ಮಾರಿದರೂ ಉಸಿರು ಚೆಲ್ಲಿದ್ದಾರೆ.

ಇಲ್ಲೊಬ್ಬ ವ್ಯಕ್ತಿ ಕೊರೊನಾದಿಂದಾಗಿ ಬರೋಬ್ಬರಿ 8 ತಿಂಗಳು ನೋವು ಅನುಭವಿಸಿದ್ದಾರೆ. ಅವರು ಗುಣಮುಖವಾಗಿ ಮನೆಗೆ ಬರಲಿ ಎಂದು ಕುಟುಂಬಸ್ಥರು ತಮ್ಮ ಬಳಿಯಿದ್ದ 50 ಎಕರೆ ಜಮೀನು ಮಾರಾಟ ಮಾಡಿದ್ದಾರೆ. ಆದರೂ ರೈತ ಮಾತ್ರ ಕೊರೊನಾಗೆ ಬಲಿಯಾಗಿದ್ದಾರೆ.

ಮಧ್ಯಪ್ರದೇಶದಲ್ಲಿನ ರಾಕ್ರಿ ಎಂಬ ಗ್ರಾಮದಲ್ಲಿನ ರೈತ ಧರಂಜಯ್ ಸಿಂಗ್(50) ಎಂಬ ವ್ಯಕ್ತಿಯೇ ಈ ರೀತಿ ಕೊರೊನಾಗೆ ಬಲಿಯಾದವರು. ಈ ರೈತನಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆನಂತರ ಅವರಲ್ಲಿ ಹಲವು ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಇದರಿಂದಾಗಿ ಅವರು ಚೇತರಿಸಿಕೊಳ್ಳುವುದು ಕಷ್ಟಸಾಧ್ಯವಾಯಿತು.

ಆದರೆ, ಕುಟುಂಬಸ್ಥರು ಮಾತ್ರ ಅವರನ್ನು ಉಳಿಸಿಕೊಳ್ಳಲೇಬೇಕೆಂದು ತಮ್ಮ ಬಳಿಯಿದ್ದ 50 ಎಕರೆ ಜಮೀನು ಹಾಗೂ ಚಿನ್ನಾಭರಣವನ್ನೆಲ್ಲ ಮಾರಾಟ ಮಾಡಿ, ಬರೋಬ್ಬರಿ 8 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಆದರೂ ಧರಂಜಯ್ ಸಿಂಗ್ ಮಾತ್ರ ಬದುಕುಳಿದಿಲ್ಲ.

ಹೇಗಾದರೂ ಮಾಡಿ ಬದುಕುಳಿಸಿಕೊಳ್ಳಲೇಬೇಕೆಂದ ಕುಟುಂಬಸ್ಥರು, ಜನ ಹೇಳಿದ ಕಡೆಯಲ್ಲಿ ಆಸ್ಪತ್ರೆಗಳಿಗೆ ದಾಖಲಿಸಿದ್ದರು. ಆದರೆ, ತಮ್ಮ ಬಳಿಯಿದ್ದ ಸಂಪತ್ತೆಲ್ಲ ನಾಶವಾಯಿತೇ ಹೊರತು, ಅವರು ಉಳಿಯಲಿಲ್ಲ. ವಿದೇಶದಿಂದ ವೈದ್ಯರನ್ನು ಕರೆಯಿಸಿ ಅವರಿಗೆ ಚಿಕಿತ್ಸೆ ನೀಡಿದರೂ ಯಾವುದೇ ಫಲಕಾರಿಯಾಗಲಿಲ್ಲ.

ಇವರು ಮಧ್ಯಪ್ರದೇಶದಲ್ಲಿಯೇ ಆದರ್ಶ ರೈತರಾಗಿದ್ದರು. ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ಕೂಡ ಇವರನ್ನು ಸನ್ಮಾನಿಸಿದ್ದರು. ಕೊರೊನಾ ಸಂದರ್ಭದಲ್ಲಿ ಜನ ಸೇವೆ ಮಾಡುತ್ತಿದ್ದ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಸ್ಟ್ರಾಬೆರಿ ಹಾಗೂ ಗುಲಾಬಿ ಕೃಷಿಯಿಂದ ಇವರು ಹೆಸರು ವಾಸಿಯಾಗಿದ್ದರು. ಸರ್ಕಾರದಿಂದ ಇವರ ಕುಟುಂಬಕ್ಕೆ ಈಗ 4 ಲಕ್ಷ ರೂ. ಪರಿಹಾರ ಸಿಕ್ಕಿದೆ.