ಅಪಘಾತದಲ್ಲಿ ಮೃತಪಟ್ಟ ಬಾಲಕಿ ಸಮನ್ವಿಯ ಮೃತದೇಹ ಇಂದು ಕುಟುಂಬಕ್ಕೆ ಹಸ್ತಾಂತರ

ಬೆಂಗಳೂರು: ಕನ್ನಡದ ಖಾಸಗಿ ಮನರಂಜನಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್(Nannamma superstar) ರಿಯಾಲಿಟಿ ಶೋನ ಸ್ಪರ್ಧಿ, ಹಿರಿಯ ಹರಿಕಥಾ ಕಲಾವಿದ ದಿವಂಗತ ಗುರುರಾಜ್ ನಾಯ್ಡು(Gururaj Naidu) ಮೊಮ್ಮಗಳು ಆರು ವರ್ಷದ ಬಾಲಕಿ ಸಮನ್ವಿ(Samanvi) ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಂದು ಬೆಳಗ್ಗೆ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.

ಸದ್ಯ ಬಾಲಕಿಯ ಮೃತದೇಹ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿದೆ.

ಸದ್ಯ ಮಗುವಿನ ತಾಯಿ ಅಮೃತಾ ನಾಯ್ದು(Amrutha Naidu) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಪುಟಾಣಿ ಸಮನ್ವಿಯ ನಿಧನಕ್ಕೆ ಸ್ಯಾಂಡಲ್ ವುಡ್ ನ ಕಲಾವಿದರಾದ ಕಿಚ್ಚ ಸುದೀಪ್(Kichcha Sudeepa), ತಾರಾ ಅನುರಾಧ್, ಅನುಪ್ರಭಾಕರ್, ಸೃಜನ್ ಲೋಕೇಶ್ ಸೇರಿದಂತೆ ಕಿರುತೆರೆ ಕಲಾವಿದರು ಕಂಬನಿ ಮಿಡಿದಿದ್ದಾರೆ.

ನಡೆದ ಘಟನೆಯೇನು?: ಬೆಂಗಳೂರಿನ (Bengaluru) ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಸಂಜೆ ಹೊತ್ತು ಶಾಪಿಂಗ್ ಮಾಡಲೆಂದು ತಾಯಿ-ಮಗಳು ಸ್ಕೂಟರ್ ಮೇಲೆ ತೆರಳುತ್ತಿದ್ದರು. ಈ ವೇಳೆ ಸ್ಕೂಟರ್​ಗೆ ಹಿಂದಿನಿಂದ ಟಿಪ್ಪರ್ ಬಂದು ಹೊಡೆದಿದೆ. ಚಕ್ರದಡಿಗೆ ಸಿಲುಕಿ ಪುಟ್ಟ ಬಾಲಕಿ ಸಮನ್ವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಮೃತಾ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಟಿಪ್ಪರ್ ಚಾಲಕನನ್ನು ಕುಮಾರಸ್ವಾಮಿ ಲೇಔಟ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ.ಎಸ್.ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಾಲಕ ತಪ್ಪೊಪ್ಪಿಗೆ: ಆಟೋ ಹಿಂದಿಕ್ಕುವ ಭರದಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಟಿಪ್ಪರ್ ಚಾಲಕ ಮಂಚೇಗೌಡ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ನಾಲ್ಕು ತಿಂಗಳ ಗರ್ಭಿಣಿ ಅಮೃತಾ: ಅಮೃತಾ ನಾಯ್ಡು ಹಾಗೂ ರೂಪೇಶ್ ನಾಯ್ಡು ಅವರಿಗೆ ಸಮನ್ವಿ ಎರಡನೇ ಮಗು. ಮೊದಲ ಮಗು ಅನಾರೋಗ್ಯದಿಂದ ಮೃತಪಟ್ಟಿತ್ತು. ಇದೀಗ ಎರಡನೇ ಮಗು ಕೂಡ ಮೃತಪಟ್ಟು ದಂಪತಿಗೆ ಇನ್ನಷ್ಟು ದುಃಖವನ್ನುಂಟುಮಾಡಿದೆ. ಅಲ್ಲದೆ ಅಮೃತಾ ನಾಯ್ಡು ಅವರು ನಾಲ್ಕು ತಿಂಗಳ ಗರ್ಭಿಣಿ ಬೇರೆ. ಈ ಸಂದರ್ಭದಲ್ಲಿ ದುರಂತದ ಮೇಲೆ ದುರಂತ ಕುಟುಂಬಕ್ಕೆ ಬಂದೊದಗಿದೆ.

ಅಮೃತಾ ಅವರ ಪತಿ ರೂಪೇಶ್ ನಾಯ್ಡು ಅವರು ಖಾಸಗಿ ಕಂಪೆನಿ ಉದ್ಯೋಗಿ ಆಗಿದ್ದಾರೆ. ಬಾಲಕಿ ಸಮನ್ವಿಗೆ ಶಾಲೆಗೆ ಹೋಗಲು ಅನುಕೂಲವಾಗಲೆಂದು ವಿಲ್ಸನ್ ಗಾರ್ಡನ್​ನಿಂದ ಕನಕಪುರ ರಸ್ತೆಗೆ ಇವರು ಶಿಫ್ಟ್​ ಆಗಿದ್ದರು.

ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕ ಜನಪ್ರಿಯ: ಇತ್ತೀಚೆಗೆ ಕನ್ನಡದ ಖಾಸಗಿ ಮನರಂಜನಾ ವಾಹಿನಿಯಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಆರಂಭವಾಗಿ ಜನಮೆಚ್ಚುಗೆ ಗಳಿಸಿತ್ತು. ಅದರಲ್ಲಿ ತಾಯಿ-ಮಗಳು ಅಮೃತಾ ನಾಯ್ಡು ಮತ್ತು ಸಮನ್ವಿ ಸ್ಪರ್ಧಿಗಳಾಗಿ ತೆರಳಿದ್ದರು. ನಂತರ ಅಮೃತಾ ಅವರು ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಶೋನಿಂದ ಅರ್ಧಕ್ಕೆ ನಿರ್ಗಮಿಸಿದ್ದರು. ಶೋನಲ್ಲಿ ಸ್ಪರ್ಧಿಸಿದಷ್ಟು ದಿನ ಚಟುವಟಿಕೆಯಿಂದ ಭಾಗವಹಿಸಿ ತೀರ್ಪುಗಾರರ, ಸಹಸ್ಪರ್ಧಿಗಳ, ವೀಕ್ಷಕರ ಜನಮೆಚ್ಚುಗೆ ಗಳಿಸಿದ್ದರು ಈ ತಾಯಿ-ಮಗಳು.